ಈಗಾರ್ - ಮಧ್ಯಕಾಲೀನ ರಷ್ಯನ್ನರ ಮನಸ್ಸನ್ನು ಸೂರೆಗೊಂಡ ವೀರಯೋಧ. ದೇಶಕ್ಕಾಗಿ ಹೋರಾಡಿ ಒಡನಾಡಿಗಳಿಗೊಂದು ಜೀವನಾದರ್ಶವನ್ನೊದಗಿಸಿದವ. ರಾಜಕುಮಾರ ಈಗಾರ್ ಪೊಲಫ್‍ಟ್ಸಿಯಮೇಲೆ ದಂಡಯಾತ್ರೆ ನಡೆಸಿ, ಪ್ರಾರಂಭದಲ್ಲಿ ಜಯಗಳಿಸಿ ಕೊನೆಗೆ ಸೆರೆಯಾಳಾದ ಕಥೆಯನ್ನು ಬಿತ್ತರಿಸುವ ರಷ್ಯನ್ ಗದ್ಯಕಾವ್ಯ. ದಿ ಲೇ ಆಫ್ ಈಗಾರ್ಸ್ ಕ್ಯಾಂಪೇನ್ ಎಂಬುದು ಗ್ರಂಥದ ಇಂಗ್ಲಿಷ್ ಶೀರ್ಷಿಕೆ, 12ನೆಯ ಶತಮಾನದ್ದು. ಪ್ರಾಚೀನ ರಷ್ಯನ್ ಸಾಹಿತ್ಯದಲ್ಲಿ ರಾಷ್ಟ್ರೀಯ ಕಾವ್ಯ ಎನ್ನಿಸಿಕೊಂಡ ಕೃತಿ. ಸಮರೋತ್ಸಾಹ, ದೇಶಾಭಿಮಾನಗಳು ಬೆರೆತ ಕೃತಿ. ಇದರ ಕರ್ತೃ ಯಾರೆಂದು ತಿಳಿದು ಬಂದಿಲ್ಲ. ಈ ಕೃತಿಯಲ್ಲಿ ಕಂಡು ಬರುವ ಧ್ವನಿ ಮತ್ತು ಪ್ರತಿಮೆಗಳ ಬಳಕೆ ಮತ್ತು ಭಾಷಾವೈಭವ ಇದಕ್ಕೆ ವಿಶೇಷಸ್ಥಾನವನ್ನು ಕೊಟ್ಟಿವೆ. ಇದರ ಶೈಲಿಯಲ್ಲಿ ಜಟಿಲ ಲಯವುಂಟು. ಭಾವಗೀತೆ, ಮಹಾಕಾವ್ಯ, ರಾಜಕೀಯವಾಗ್ಮಿತೆ-ಈ ಎಲ್ಲದರ ಅಂಶಗಳೂ ಇದರಲ್ಲಿ ಬೆರೆತಿವೆ.

	ಯುದ್ಧ ಸಂಗತಿ ನಡೆದದ್ದು 1185ರಲ್ಲಿ. ಇದು ನಡೆದ ಸ್ವಲ್ಪ ದಿನಗಳಲ್ಲೇ ಈ ಕಾವ್ಯ ರಚನೆ ಆಗಿದ್ದಿರಬೇಕು. 16ನೆಯ ಶತಮಾನದಲ್ಲಿ ರಚನೆಯಾದ ಕೈಬರಹದ ಪ್ರತಿ 1795ರಲ್ಲಿ ದೊರಕಿ 1800ರಲ್ಲಿ ಕಾವ್ಯ ಮೊದಲ ಬಾರಿ ಪ್ರಕಟವಾಯಿತು. 1812ರ ಮಾಸ್ಕೊ ಬೆಂಕಿಯ ಅನಾಹುತದಲ್ಲಿ ಭಸ್ಮವಾಯಿತು. ಈ ಕೃತಿಗೆ ಪ್ರಪಂಚದ ಮಹಾಕಾವ್ಯಗಳ ಪಂಕ್ತಿಯಲ್ಲಿ ಒಂದು ಸ್ಥಾನವಿದೆ.
(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ